ಹಳಿಯಾಳ: ಬಹುಗ್ರಾಮ ಕುಡಿಯುವ ನೀರು ಯೋಜನೆ ಹಾಗೂ ಜಲಜೀವನ್ ಮಿಷನ್ ಯೋಜನೆಯಡಿ ನಡೆದ ಕುಡಿಯುವ ನೀರು ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದ್ದು, ಗ್ರಾಮದಲ್ಲಿ ನೀರು ಸರಬರಾಜು ಸಮರ್ಪಕವಾಗಿಲ್ಲ ಎಂದು ಆರೋಪಿಸಿ ಬಿ.ಕೆ.ಹಳ್ಳಿ ಗ್ರಾಮಸ್ಥರು ಬುಧವಾರ ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ತಹಶೀಲ್ದಾರ್ ಫಿರೋಜಷಾ ಸೋಮನಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಬಿ.ಕೆ.ಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೂ.167 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾದ ಕಾಮಗಾರಿ 24.09.2025ರಂದು ಪೂರ್ಣಗೊಂಡು ಹಸ್ತಾಂತರವಾಗಿದೆ ಎಂದು ದಾಖಲೆಗಳಲ್ಲಿದ್ದರೂ, ಗ್ರಾಮದಲ್ಲಿ ಅನೇಕ ನಳಗಳಲ್ಲಿ ನೀರು ಬರದ ಸ್ಥಿತಿ ಮುಂದುವರಿದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕಾಮಗಾರಿಗೆ ಸಂಬಂಧಿಸಿದ 2019ರ ಡಿಪಿಆರ್ ಅಧ್ಯಯನ, 2023ರ ಪೂರ್ವ ಅಧ್ಯಯನ ವರದಿ, ಗುಣಮಟ್ಟ ಪರೀಕ್ಷಾ ಪ್ರಮಾಣ ಪತ್ರ, ಗುತ್ತಿಗೆದಾರರ ಅರ್ಹತಾ ದಾಖಲೆಗಳು ಸೇರಿದಂತೆ ಹಲವು ದಾಖಲೆಗಳನ್ನು ಬಹಿರಂಗಪಡಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇದಲ್ಲದೆ, ಬಳಸಿದ ಪೈಪುಗಳ ಗುಣಮಟ್ಟ ಪ್ರಮಾಣ ಪತ್ರ, ಪ್ರೆಷರ್ ವಾಲ್ವ್ ಅಳವಡಿಕೆಯಲ್ಲಿ ನಿರ್ಲಕ್ಷ್ಯ, ಗ್ರಾಮ ಪಂಚಾಯತ್ ಹಸ್ತಾಂತರ ಠರಾವು ಹಾಗೂ ಹಸ್ತಾಂತರ ಪ್ರಕ್ರಿಯೆಯಲ್ಲಿ ನಡೆದ ಅಕ್ರಮಗಳ ಕುರಿತು ಸ್ಪಷ್ಟನೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಾಮಗಾರಿ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.