ತೆರಿಗೆ ವಸೂಲಾತಿ ಅಭಿನಂದನಾ ಸಮಾರಂಭಕ್ಕೆ ಗ್ರಾಮ ಪಂಚಾಯತ್ ಕಚೇರಿಗಳೇ ಬಂದ್!
ಹಳಿಯಾಳ: ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಮತ್ತು ತಾಲ್ಲೂಕು ಪಂಚಾಯತ್ ಹಳಿಯಾಳ ವತಿಯಿಂದ 2025-26ನೇ ಸಾಲಿನ ತೆರಿಗೆ ವಸೂಲಾತಿ ಸಾಧನೆಗೆ ಸಂಬಂಧಿಸಿದ ಅಭಿನಂದನಾ ಕಾರ್ಯಕ್ರಮ ಹಳಿಯಾಳ ಪಟ್ಟಣದ ಪುರಭವನದಲ್ಲಿ ಆಯೋಜನೆಯಾಗಿದ್ದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ ಪರಿಣಾಮ ಹಲವೆಡೆ ಪಂಚಾಯತ್ ಕಚೇರಿಗಳು ದಿನಪೂರ್ತಿ ಬಂದ್ ಆಗಿ ಸಾರ್ವಜನಿಕ ಸೇವೆಗಳು ಅಸ್ತವ್ಯಸ್ತಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ತಾಲೂಕಿನ ಹಲವು ಗ್ರಾಮಗಳಲ್ಲಿ ಗ್ರಾಮ ಪಂಚಾಯತ್ ಕಚೇರಿಗಳಿಗೆ ಸಾರ್ವಜನಿಕರು ತಮ್ಮ ನಿತ್ಯದ ಆಡಳಿತಾತ್ಮಕ ಕೆಲಸಗಳಿಗಾಗಿ ಆಗಮಿಸಿದಾಗ ಕಚೇರಿಗಳು ಬೀಗ ಬಿದ್ದ ಸ್ಥಿತಿಯಲ್ಲಿ ಕಂಡುಬಂದಿವೆ. ಇದರಿಂದ ದಾಖಲೆಪತ್ರ, ತೆರಿಗೆ, ಪಿಂಚಣಿ, ನೀರು ಸರಬರಾಜು, ಸರ್ಕಾರಿ ಯೋಜನೆ ಅರ್ಜಿ ಹಾಗೂ ಇತರೆ ತುರ್ತು ಕಾರ್ಯಗಳಿಗಾಗಿ ಬಂದಿದ್ದ ಜನರು ನಿರಾಶೆಯಿಂದ ಹಿಂದಿರುಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೂರದ ಹಳ್ಳಿಗಳಿಂದ ಬಂದ ನಾಗರಿಕರಿಗೆ ಇದರಿಂದ ಅನಗತ್ಯ ತೊಂದರೆ ಉಂಟಾಗಿದೆ ಎಂದು ತಿಳಿದುಬಂದಿದೆ.
ಕೇವಲ ಅಭಿನಂದನಾ ಸಮಾರಂಭಕ್ಕಾಗಿ ಗ್ರಾಮ ಪಂಚಾಯತ್ ಸಿಬ್ಬಂದಿಯನ್ನು ಒಂದೇ ಸ್ಥಳಕ್ಕೆ ಕರೆಯುವ ಮೂಲಕ ಜನಸೇವಾ ವ್ಯವಸ್ಥೆಗೆ ವ್ಯತ್ಯಯ ಉಂಟಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕರ ಕೆಲಸ ನಿರ್ವಹಿಸಬೇಕಾದ ಕಚೇರಿಗಳನ್ನು ಮುಚ್ಚಿ ಕಾರ್ಯಕ್ರಮಕ್ಕೆ ಆದ್ಯತೆ ನೀಡಿರುವ ಕ್ರಮದ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಆಡಳಿತ ವ್ಯವಸ್ಥೆ ಜನರ ಸೌಲಭ್ಯವನ್ನು ಕಡೆಗಣಿಸಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಪಂಚಾಯತ್ ಕಚೇರಿಗಳನ್ನು ಮುಚ್ಚುವ ಮೊದಲು ಗ್ರಾಮಸ್ಥರಿಗೆ ಸೂಕ್ತ ಮಾಹಿತಿ ನೀಡಲಾಗಿತ್ತೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಕೆಲವು ಗ್ರಾಮ ಪಂಚಾಯತ್‌ಗಳಲ್ಲಿ ನೋಟಿಸ್ ಅಂಟಿಸಿ ಮುಂಚಿತ ಮಾಹಿತಿ ನೀಡಲಾಗಿದ್ದರೆ, ಅನೇಕ ಕಡೆ ಯಾವುದೇ ಅಧಿಕೃತ ಸೂಚನೆ ಇಲ್ಲದೆ ಕಚೇರಿಗಳು ಬಂದ್ ಆಗಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಈ ಕುರಿತು ಸ್ಪಷ್ಟತೆ ಕೊರತೆಯಿರುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಇಂತಹ ಕಾರ್ಯಕ್ರಮಗಳನ್ನು ಸಾರ್ವಜನಿಕ ಸೇವೆಗೆ ಅಡ್ಡಿಯಾಗದ ರೀತಿಯಲ್ಲಿ ಆಯೋಜಿಸಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಭವಿಷ್ಯದಲ್ಲಿ ಈ ರೀತಿಯ ಪರಿಸ್ಥಿತಿ ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Related