ಹಳಿಯಾಳ: ಯುಗಾದಿ ಹಬ್ಬದ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹಳಿಯಾಳ ತಾಲೂಕು ಘಟಕದ ವತಿಯಿಂದ ಪಥಸಂಚಲನ ಮತ್ತು ವೇದಿಕೆ ಕಾರ್ಯಕ್ರಮ ಜರುಗಿತು. ಗ್ರಾಮದೇವಿ ಮೈದಾನದಿಂದ ಆರಂಭವಾದ ಪಥಸಂಚಲನ ಬಸ್ ನಿಲ್ದಾಣ ರಸ್ತೆ, ಕುಂಬಾರ ಗಲ್ಲಿ, ಶಟ್ಟಿಗಲ್ಲಿ, ಅರ್ಬನ್ ಬ್ಯಾಂಕ್ ಸರ್ಕಲ್ ಹಾಗೂ ಮುಖ್ಯ ಮಾರುಕಟ್ಟೆ ಮಾರ್ಗವಾಗಿ ಸಂಚರಿಸಿ ಪುನಃ ಮೈದಾನದಲ್ಲೇ ಅಂತ್ಯಗೊಂಡಿತು. ನಗರದ ಪ್ರಮುಖ ರಸ್ತೆಗಳಲ್ಲಿ ಶಿಸ್ತುಬದ್ಧವಾಗಿ ನಡೆದ ಪಥಸಂಚಲನ ಸಾರ್ವಜನಿಕರ ಗಮನಸೆಳೆಯಿತು.

ಪಥಸಂಚಲನದ ಬಳಿಕ ನಡೆದ ವೇದಿಕೆ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ತುಂತುರು ಮಳೆ ಸುರಿದರೂ ಸ್ವಯಂಸೇವಕರು ಮಳೆಯನ್ನು ಲೆಕ್ಕಿಸದೇ ಕುಳಿತು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಳೆಯಲ್ಲಿಯೇ ಕಾರ್ಯಕ್ರಮ ಮುಂದುವರಿದಿದ್ದು ಸ್ವಯಂಸೇವಕರ ಶಿಸ್ತು ಮತ್ತು ನಿಷ್ಠೆ ಪ್ರತಿಬಿಂಬಿಸಿತು.

ಪ್ರಚಾರ ಪ್ರಮುಖ ಅರುಣಕುಮಾರಜೀ ಸಂಘಟನೆಯ ತತ್ವಗಳು, ಸೇವಾ ಮನೋಭಾವ ಮತ್ತು ಸಂಕಷ್ಟಗಳನ್ನು ಎದುರಿಸುವ ಸಾಮರ್ಥ್ಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಮಾರುತಿ ಸೋಮನಿಂಗ್ ಕೊಲೆಕರ ಮಾತನಾಡಿದರು. ಈ ಸಂದರ್ಭದಲ್ಲಿ ಗಣ್ಯರು, ಸ್ವಯಂಸೇವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.